ಯಾದಗಿರಿ | ದಿನಾಂಕ: 29-01-2026
ಇಂದು ಯಾದಗಿರಿ ಜಿಲ್ಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳು (CHO) ತಮ್ಮ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಶಾಂತಿಯುತ ಮುಷ್ಕರವು ಸಂಪೂರ್ಣವಾಗಿ ಯಶಸ್ವಿಯಾಗಿ ನಡೆಯಿತು.
ನಿರಂತರವಾಗಿ ನಡೆಯುತ್ತಿರುವ ವೇತನ ಪಾವತಿ ವಿಳಂಬ, ಪ್ರೋತ್ಸಾಹ ಧನದಲ್ಲಿ ಅನ್ಯಾಯಕರ ಕಡಿತ, ವಿವಿಧ ಭತ್ಯೆಗಳ ಬಾಕಿ, ಹಾಗೂ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ಸಿಬ್ಬಂದಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಕಿರುಕುಳಗಳ ವಿರುದ್ಧ ಈ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಕೆಳಕಂಡ ಪ್ರಮುಖ ಬೇಡಿಕೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಮುಂದಿಟ್ಟಿದ್ದೇವೆ:
- ವೇತನ ಪಾವತಿಯಲ್ಲಿ ನಡೆಯುತ್ತಿರುವ ನಿರಂತರ ವಿಳಂಬವನ್ನು ತಕ್ಷಣವೇ ನಿವಾರಿಸಬೇಕು.
- 2024–25ನೇ ಸಾಲಿನ 4 ತಿಂಗಳ ಪೂರ್ಣ ಪ್ರೋತ್ಸಾಹ ಧನ (Incentive) ಹಾಗೂ ವಿನಾಕಾರಣ ಕಡಿತಗೊಳಿಸಿರುವ ₹2100/- ರಂತೆ 5 ತಿಂಗಳುಗಳ ಮೊತ್ತವನ್ನು ಸೇರಿಸಿ ಉಳಿದಿರುವ ಸಂಪೂರ್ಣ ಪ್ರೋತ್ಸಾಹ ಧನವನ್ನು ಪಾವತಿಸಬೇಕು.
- 2025ನೇ ಸಾಲಿನ ಪ್ರೋತ್ಸಾಹ ಧನವನ್ನು ತಕ್ಷಣ ಪಾವತಿಸಬೇಕು.
- ಅರಿಯರ್ಸ್, ಬೋನಸ್, TA ಬಿಲ್ ಹಾಗೂ ಇಂಟರ್ನೆಟ್ ಬಿಲ್ಗಳ ಬಾಕಿಯನ್ನು ಕೂಡಲೇ ಪಾವತಿಸಬೇಕು.
- 16 ತಿಂಗಳುಗಳಿಂದ ಬಾಕಿ ಇರುವ ಗ್ರೂಪ್–ಡಿ ಹಣವನ್ನು (ಕೆಲವು AAKಗಳಿಗೆ ಇನ್ನೂ ಹೆಚ್ಚಿನ ತಿಂಗಳುಗಳ ಬಾಕಿ ಇರುವುದರಿಂದ) ತಕ್ಷಣ ಪಾವತಿಸಬೇಕು.
- 2024–25ನೇ ಸಾಲಿನ ಆರೋಗ್ಯ ಮೇಳ (Health Mela) ಮೊತ್ತವನ್ನು ಕೂಡಲೇ ಪಾವತಿಸಬೇಕು.
- ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ಕಾರಣ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ತಕ್ಷಣ ಶಿಸ್ತುಕ್ರಮ ಜರುಗಿಸಬೇಕು.
ಮುಷ್ಕರದ ವೇಳೆ ಸ್ಥಳಕ್ಕೆ ಆಗಮಿಸಿದ ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಮೇಲ್ಕಂಡ ಬಾಕಿ ಹಣವನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿರುತ್ತಾರೆ. ಆದರೆ, ಈ ಭರವಸೆಯು ಕಾರ್ಯರೂಪಕ್ಕೆ ಬರದೆ ಬಾಕಿ ಹಣ ಬಿಡುಗಡೆ ಮಾಡದೇ ಇದ್ದಲ್ಲಿ, ಮುಂದಿನ ಫೆಬ್ರುವರಿ 15ರಂದು ರಾಷ್ಟ್ರ ಹೆದ್ದಾರಿಯಲ್ಲಿ ರಸ್ತೆ ತಡೆ ಹೋರಾಟ ನಡೆಸಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಮಮಿತ್ ಗಾಯಕ್ವಾಡ್ ಅವರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಂಘದವರು ಗೌರವಾಧ್ಯಕ್ಷರಾದ ಆರ್ ಮಾನಸಯ್ಯ ,All Indian CHO Association ಪ್ರಧಾನ ಕಾರ್ಯದರ್ಶಿಯಾದಂತಹ ಕಿರಣ್ ತೊಂಡಿಚೋರಿ, ರಾಜ್ಯ ಸಮಿತಿಯ ಉಪಾಧ್ಯಕ್ಷರಾದ ಬಸವಾನಂದ್ ಹೊಸಮನಿ ಕಲಬುರ್ಗಿ ಜಿಲ್ಲೆಯ ಉಪಾಧ್ಯಕ್ಷರಾದ ಅನಿಲ್ ಪಾಟೀಲ್, ಬೀದರ್ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾದ ದಿಲೀಪ್, ಮತ್ತು ಯಾದಗಿರಿ ಜಿಲ್ಲಾ ಸಮಿತಿ ಅಧ್ಯಕ್ಷರಾದ ಕ್ರಿಷ್ಟೋಫರ್, ಮತ್ತು ಜಿಲ್ಲಾ ಸಮಿತಿಯ ಪದಾಧಿಕಾರಿಗಳು ತಾಲೂಕ ಅಧ್ಯಕ್ಷರು ತಾಲೂಕ ಪದಾಧಿಕಾರಿಗಳು ಮತ್ತು 110ಕ್ಕಿಂತ ಮೇಲ್ಪಟ್ಟು ಸಮುದಾಯ ಆರೋಗ್ಯ ಅಧಿಕಾರಿಗಳು ಮುಷ್ಕರದಲ್ಲಿ ಭಾಗಿಯಾಗಿರುತ್ತಾರೆ.
— ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘ
ಯಾದಗಿರಿ ಜಿಲ್ಲೆ
