ಬೆಂಗಳೂರು
ದಿನಾಂಕ:12.11.2026
ಕರ್ನಾಟಕ ರಾಜ್ಯದ ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ (CHOs) ಪ್ರತ್ಯೇಕ ರಾಜ್ಯ ಸೇವಾ ವೃಂದ (Separate CHO State Service Cadre) ರಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಕರ್ನಾಟಕ ರಾಜ್ಯ CHO ಯೂನಿಯನ್ ವತಿಯಿಂದ ಅಧಿಕೃತ ಪತ್ರ ಬರಿಯಲಾಗಿದೆ.
ರಾಜ್ಯದಾದ್ಯಂತ ಆಯುಷ್ಮಾನ್ ಆರೋಗ್ಯ ಮಂದಿರಗಳ ಮೂಲಕ ಜನಸಾಮಾನ್ಯರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಆರೋಗ್ಯ ಇಲಾಖೆಯ ವಿವಿಧ ಜವಾಬ್ದಾರಿಗಳನ್ನು ನಿರಂತರವಾಗಿ ನಿರ್ವಹಿಸುತ್ತಿದ್ದರೂ, CHO ಗಳು ಗುತ್ತಿಗೆ ಆಧಾರಿತ ಸೇವಾ ವ್ಯವಸ್ಥೆಯಲ್ಲಿಯೇ ಮುಂದುವರಿಯುತ್ತಿರುವುದು ಅವರ ಸೇವಾ ಭದ್ರತೆ ಮತ್ತು ವೃತ್ತಿಪರ ಭವಿಷ್ಯದ ದೃಷ್ಟಿಯಿಂದ ಗಂಭೀರವಾದ ವಿಚಾರವಾಗಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ CHO ಗಳಿಗೆ ಪ್ರತ್ಯೇಕ ರಾಜ್ಯ ಸೇವಾ ವೃಂದ ರಚಿಸುವ ಕುರಿತು ಕೇಂದ್ರ ಸರ್ಕಾರದಿಂದ ಅಗತ್ಯ ನೀತಿ ಮಾರ್ಗದರ್ಶನ, ತಾಂತ್ರಿಕ ಸಹಕಾರ ಹಾಗೂ ತಜ್ಞರ ಶಿಫಾರಸುಗಳನ್ನು ಒದಗಿಸುವಂತೆ ಯೂನಿಯನ್ ಮನವಿ ಮಾಡಿದೆ.
ವಿಶೇಷವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳು ಹಾಗೂ ಏಪ್ರಿಲ್ 2022ರ Public Health Management Cadre Guidelines ಆಧಾರದ ಮೇಲೆ ಪ್ರತ್ಯೇಕ CHO ಸೇವಾ ವೃಂದ ರಚನೆಗೆ ಅಗತ್ಯವಿರುವ ನೀತಿ ಮತ್ತು ಆಡಳಿತಾತ್ಮಕ ಕ್ರಮಗಳ ಕುರಿತು ತಾಂತ್ರಿಕ ಸಹಕಾರ ನೀಡುವಂತೆ ಕೋರಲಾಗಿದೆ.
ಪ್ರತ್ಯೇಕ ಸೇವಾ ವೃಂದ ರಚನೆಯಿಂದ CHO ಗಳಿಗೆ ಸೇವಾ ಸ್ಥಿರತೆ, ಸ್ಪಷ್ಟವಾದ ಸೇವಾ ನಿಯಮಗಳು, ವೃತ್ತಿಪರ ಪ್ರಗತಿ ಹಾಗೂ ದೀರ್ಘಕಾಲೀನ ಸೇವಾ ಭದ್ರತೆ ದೊರೆಯುವುದರ ಜೊತೆಗೆ ಕರ್ನಾಟಕದ ಪ್ರಾಥಮಿಕ ಆರೋಗ್ಯ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದೆ ಎಂಬ ವಿಶ್ವಾಸವನ್ನು ಯೂನಿಯನ್ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರವು ಈ ಮನವಿಯನ್ನು ಪರಿಗಣಿಸಿ ಅಗತ್ಯ ಮಾರ್ಗದರ್ಶನ ಮತ್ತು ತಾಂತ್ರಿಕ ಸಹಕಾರ ನೀಡಬೇಕು ಹಾಗೂ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಕ್ರಮ ಕೈಗೊಂಡು ಪ್ರತ್ಯೇಕ CHO ರಾಜ್ಯ ಸೇವಾ ವೃಂದ ರಚನೆಗೆ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ CHO ಯೂನಿಯನ್ ಆಗ್ರಹಿಸಿದೆ.
ಮಮಿತ್ ಗಾಯಕ್ವಾಡ್
ರಾಜ್ಯಾಧ್ಯಕ್ಷರು
ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ NHM ಗುತ್ತಿಗೆ ನೌಕರರ ಸಂಘ (ರಿ.)
ಕರ್ನಾಟಕ ರಾಜ್ಯ CHO ಯೂನಿಯನ್


Good move sir Thank you all Union leaders.
Very good move
Very good move sir